ಲಾವಣಿ : - ನಿರ್ದಿಷ್ಟ ಕಥೆಯನ್ನು ಸಣ್ಣಸಣ್ಣ ಪದ್ಯಗಳಲ್ಲಿ ಮನಮುಟ್ಟು ವಂತೆ ಹೇಳುವ ಲಘುಕಾವ್ಯವೇ ಲಾವಣಿ. ಈ ಬಗೆಯ ರಚನೆಗಳು ಮಧ್ಯಕಾಲೀನ ಯುಗದಲ್ಲಿ ಯುರೋಪಿನಲ್ಲಿ ಬೆಳೆವಣಿಗೆ ಹೊಂದಿ ‘ಬ್ಯಾಲೆಡ್’ ಎನ್ನುವ ಹೆಸರು ಪಡೆದುಕೊಂಡವು. ಕಾಲದೇಶಗಳಿಗನುಗುಣ ವಾಗಿ ಇವುಗಳಲ್ಲಿ ಬದಲಾವಣೆ ಕಂಡುಬಂದರೂ ಕೆಲವು ಸ್ಥಿರಲಕ್ಷಣ ಗಳಿರುತ್ತವೆ.
 
ಲಾವಣಿಗಳು ಕಥನಾತ್ಮಕವಾದುವು. ಯಾವುದಾದರೊಂದು ಘಟನೆ ಯನ್ನು ಕೇಂದ್ರವನ್ನಾಗಿ ಹೊಂದಿ ಹಾಡಲು ಬರುತ್ತವೆ. ವಸ್ತು, ಪಾತ್ರ, ಆವರಣ ಮತ್ತು ಕ್ರಿಯೆಯಲ್ಲಿ ಜನಪದಕ್ಕೆ ಸೇರುತ್ತವೆ. ವಸ್ತುನಿರ್ವಹಣೆ ಯಲ್ಲಿ ಕ್ರಿಯೆಯೇ ಪ್ರಧಾನ. ಅದು ಚುರುಕಾಗಿದ್ದು ಒಂದು ಗೊತ್ತಾದ ಹಂತದಲ್ಲಿ ಶೃಂಗವನ್ನು ಸಾಧಿಸಿಕೊಳ್ಳುತ್ತದೆ. ನಾಟಕೀಯತೆ ಲಾವಣಿಗಳ ಜೀವಾಳ. ಕಥನಕ್ರಿಯೆಗೆ ತೊಡಕಾಗುವ ಅನಾಟಕೀಯ ಸನ್ನಿವೇಶಗಳು ಬಿಟ್ಟುಹೋಗಿ ಮುಖ್ಯ ನಾಟಕೀಯ ಸನ್ನಿವೇಶಗಳು ಉಳಿಯುತ್ತವೆ. ಹೃದ್ಯಸಂಭಾಷಣೆ ಮತ್ತು ಪರಿಣಾಮಕಾರಿ ಅಂತ್ಯ ಇರುತ್ತದೆ. ಲಾವಣಿ ಗಳಲ್ಲಿ ದುಃಖಾಂತ ಮತ್ತು ಸುಖಾಂತ ಎರಡೂ ಕಂಡುಬರುತ್ತವೆ. ಆದರೆ ದುಃಖಾಂತವೇ ಹೆಚ್ಚು. ನರ್ತನ ಜೊತೆಗೂಡುವುದೂ ಉಂಟು. ಸ್ಕಾಂಡಿನೇವಿಯ ದೇಶದ ಲಾವಣಿಗಳಲ್ಲಿ ಇದು ಸರ್ವೇಸಾಧಾರಣ. ಇಂಗ್ಲೆಂಡ್‍ನಲ್ಲಿ ಅಪರೂಪ. ಯುರೋಪಿನ ಇತರ ದೇಶದ ಲಾವಣಿಗಳಲ್ಲಿ ಅಲ್ಲಲ್ಲಿ ನರ್ತನ ಕಾಣಿಸುತ್ತದೆ. ಕನ್ನಡದಲ್ಲಿ ಇದು ಕಂಡುಬಂದರೂ ಕೆಲವು ಪ್ರಕಾರದ ಲಾವಣಿಗಳಿಗೆ ಸೀಮಿತವಾಗಿರುತ್ತದೆ. ಪ್ರತಿಸಾಲಿನ ಅಥವಾ ಪದ್ಯದ ಮುಕ್ತಾಯದ ಹಂತದಲ್ಲಿ ಪಲ್ಲವಿಗಳು ಬರುತ್ತವೆ. ಒಂದು ಅಕ್ಷರದ ಅಥವಾ ಎರಡು ನುಡಿಗಳ ಒಳ, ಹೊರಪಲ್ಲವಿಗಳು ಕನ್ನಡದಲ್ಲಿವೆ. ಭಾಷೆ, ದೇಶಿ ಜಾಯಮಾನವುಳ್ಳದ್ದಾಗಿ ರುತ್ತದೆ. ಸಿದ್ಧನುಡಿಗಟ್ಟು ಮತ್ತು ಪುನರಾವರ್ತನೆ ಲಾವಣಿಗಳಲ್ಲಿ ಎದ್ದುತೋರುವ ಗುಣ. ಭಾವಗೀತೆಗಳು ಅರ್ಥಪ್ರಧಾನವಾಗಿದ್ದು ಸಂಗೀತಕ್ಕೆ ಅಧೀನವಾಗಿದ್ದರೆ, ಸ್ವಚ್ಛಂದ ಸ್ವಭಾವವನ್ನುಳ್ಳ ಲಾವಣಿಗಳಲ್ಲಿ ಸಂಗೀತವೇ ಲಾವಣಿಗೆ ಅಡಿಯಾಳಾಗಿರುತ್ತದೆ. ಅದು ತನ್ನ ವಿಶಿಷ್ಟ ರಾಗ ವಿನ್ಯಾಸದಿಂದ ಅರ್ಥ ಹಾಗೂ ಭಾವವನ್ನು ಉದ್ರೇಕಿಸುವ ಶಕ್ತಿಯನ್ನು ಹೊಂದಿರುತ್ತದೆ.

ಲಾವಣಿಗಳು ಜನಪದ ಸಾಹಿತ್ಯಕ್ಕೆ ಸೇರಿದ್ದರೂ ಇವು ಪುರಾತನವಾದು ವಲ್ಲ. ಸಾಹಿತ್ಯ ಪ್ರಜ್ಞೆಯನ್ನುಳ್ಳ ನುರಿತವರು ಇವನ್ನು ಕಟ್ಟಿರಬೇಕೆಂಬುದು ವಿದ್ವಾಂಸರ ಅಭಿಪ್ರಾಯ. ಹರ್ಡರ್, ಗ್ರಿಮ್, ಗುಮ್ಮರೆ ಮುಂತಾದ ಪಾಶ್ಚಾತ್ಯ ಜನಪದ ವಿದ್ವಾಂಸರು ಲಾವಣಿ ಮತ್ತು ಜನಪದಗೀತೆಗಳ ಪರಸ್ಪರ ಸಂಬಂಧವನ್ನು ಸ್ಪಷ್ಟಗೊಳಿಸದೆ ಹೋದದ್ದರಿಂದ ಮೂಲ ಸಂದಿಗ್ಧವಾಗಿ ಉಳಿಯಿತು. ಆದ್ದರಿಂದ ಲಾವಣಿ ‘ಪುರಾತನ ಪರಂಪರೆಯ ಮುಂದುವರಿಕೆ’- ನಾಯಕನೊಬ್ಬನ ಮಾರ್ಗದರ್ಶನದಲ್ಲಿ ಜನಪದರಿಂದ ಸಂಯೋಜಿಸಲ್ಪಟ್ಟಿದೆ ಎಂಬ ವಾದ ರೂಪುಗೊಂಡಿತು. ಕಿಟೆಜ್ ಎಂಬ ಲಾವಣಿ ವಿದ್ವಾಂಸ ಕೂಡ ಇವುಗಳ ನಿರ್ಮಾಣ ‘ಸಾಮೂಹಿಕ ಸೃಷ್ಟಿ’ ಕ್ರಮದಲ್ಲಾಯಿತು ಎಂದಿದ್ದಾನೆ. ಆಧುನಿಕ ವಿದ್ವಾಂಸರು ಇದನ್ನು ಒಪ್ಪದೆ ಲಾವಣಿಗಳು ವೈಯಕ್ತಿಕ ರಚನೆಗಳು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಮೂಲತಃ ವ್ಯಷ್ಟಿಸೃಷ್ಟಿಯಾದ ಲಾವಣಿ ಕಂಠಸ್ಥ ಸಂಪ್ರದಾಯದಲ್ಲಿ ಮುಂದುವರೆದು ಹಲವು ಮಾರ್ಪಾಡುಗಳಿಗೆ ಒಳಗಾಗುತ್ತದೆ; ಸಂಕಲನ ವ್ಯವಕಲನ ಕ್ರಿಯೆಯಲ್ಲಿ ಬೆಳೆಯುತ್ತದೆ, ಉತ್ತಮಗೊಳ್ಳುತ್ತದೆ. ತಾಮಸ್ ಪರ್ಸಿ ಎಂಬವನು ಇಂಗ್ಲಿಷ್ ಮತ್ತು ಸ್ಕಾಟಿಷ್ ಜನಪದ ಗಾಯಕರಿಂದ ಸಂಗ್ರಹಿಸಿ ರೆಲಿಕ್ಸ್ ಆಫ್ ಏನ್ಷಿಯಂಟ್ ಇಂಗ್ಲಿಷ್ ಪೊಯಿಟ್ರಿ (1765) ಎಂಬ ಕೃತಿಯನ್ನು ಪ್ರಕಟಿಸಿದ್ದಾನೆ. ಇದು ಲಾವಣಿ ಸಂಗ್ರಹದ ಮೊತ್ತ ಮೊದಲ ಗಂಭೀರ ಪ್ರಯತ್ನವೆನ್ನಬಹುದು. 

ಕನ್ನಡ ಜನಪದ ಸಾಹಿತ್ಯದಲ್ಲಿ ಒಂದು ನಿರ್ದಿಷ್ಟ ಪದ್ಯಜಾತಿಗೆ ಲಾವಣಿ ಎಂದು ಕರೆಯುವುದು ರೂಢಿ. ಇವುಗಳಲ್ಲಿ ಎಲ್ಲವೂ ಕಥೆಯನ್ನು ಹೇಳುವುದಿಲ್ಲ. ದೇವತಾ ಸ್ತುತಿ, ದೇಶಪ್ರೇಮ, ವಿಡಂಬನೆ, ಶೃಂಗಾರ, ವೀರ ಇವೆಲ್ಲಾ ಭಾವಗಳು ಇರುತ್ತವೆ. ಈ ಬಗೆಯ ಲಾವಣಿಗಳಲ್ಲಿ ಒಂಟಿ ಲಾವಣಿ ಮತ್ತು ಮೇಳ ಲಾವಣಿಗಳೆಂಬ ಎರಡು ಪ್ರಭೇದ ಗಳಿರುತ್ತವೆ. ಒಬ್ಬನೇ ಗಾಯಕ ಹಾಡುವ ಲಾವಣಿ ಒಂಟಿ ಲಾವಣಿಯಾದರೆ, ಗುಂಪಿನಲ್ಲಿ ಹಾಡುವುದು ಮೇಳಲಾವಣಿ. ಮೇಳಲಾವಣಿಯಲ್ಲಿ ಎರಡು ಗುಂಪುಗಳಿದ್ದು ಪುರುಷಪರವಾಗಿರುವ ತಂಡವನ್ನು ಹರದೇಸಿ(ತುರಾ), ಸ್ತ್ರೀಪರವಾಗಿರುವ ತಂಡವನ್ನು ನಾಗೇಸಿ (ಕಲ್ಗಿ) ಎಂದು ಹೆಸರಿಸುವುದು ವಾಡಿಕೆ. ಸವಾಲ್‍ಜವಾಬ್, ಶಾಹಿರಿಕೆ, ಗೀಗಿ ಮುಂತಾದ ಹೆಸರಿನಿಂದಲೂ ಗುರುತಿಸುತ್ತಾರೆ. ಲಾವಣಿಗಳ ಶರೀರವನ್ನು ಅದರ ಛಂದೋವೈವಿಧ್ಯಕ್ಕಾಗಿ ಸಖಿ, ಚೌಕ, ಖ್ಯಾಲಿ ಇತ್ಯಾದಿಯಾಗಿ ವಿಭಜಿಸುವುದುಂಟು. ಸಖಿ ನಾಂದಿಪದ್ಯ. ಒಂದೊಂದು ಪ್ರತ್ಯೇಕ ವಿಭಾಗವಾಗಿ ಬೆಳೆಯುವ ಕಥಾಭಾಗವೇ ಚೌಕ. ಇದರಲ್ಲಿ ಪಲ್ಲ, ಕೂಡುಪಲ್ಲ, ನುಡಿ ಬರುತ್ತದೆ. ಚ್ಯಾಲ, ಶ್ಲೋಕ, ಏರು ಇಳುವು ಇತ್ಯಾದಿ  ಹಾಡುಹೇಳುವ  ಕ್ರಮಗಳು  ಚೌಕದಲ್ಲಿ ಸೇರಿಕೊಂಡಿರುತ್ತವೆ. ಇಂಥ ಹತ್ತಾರು ಚೌಕಗಳ ಸಮೂಹದಿಂದಾಗಿ ಲಾವಣಿ ಶರೀರ ಹುಟ್ಟುತ್ತದೆ. ಪ್ರಾಸ, ಒಳಪ್ರಾಸ, ಅಂತ್ಯ ಪ್ರಾಸ, ಚಾಲ್, ಉಡಾನ್, ಚಿಕ್ಕಉಡಾನ್ ಇತ್ಯಾದಿ ಕೂಡಿಕೊಂಡು ಬರುವ ಲಾವಣಿಗಳ ಸ್ವರೂಪ ಪ್ರಾದೇಶಿಕವಾಗಿ ಭಿನ್ನವಾಗಿರುತ್ತವೆ. ಯುದ್ಧ ಕಾಲದಲ್ಲಿ ಜನಜಾಗೃತಿ ಗೊಳಿಸಲು, ಹುರುಪು ತುಂಬಲು ಲಾವಣಿಗಳು ಬಳಕೆಯಾಗುತ್ತಿದ್ದುವು. 

ಕಥನಾತ್ಮಕ ಲಾವಣಿಗಳಲ್ಲಿ ಜನಪದಕಥೆಗಳ ಹಲವು ಲಕ್ಷಣಗಳು ಕಾಣಬರುತ್ತವೆ. ಅವುಗಳ ವಸ್ತು ಆಶಯವನ್ನು ಆಧರಿಸಿ ವಿಭಜಿಸಲು ಬರುತ್ತವೆ. ಪೌರಾಣಿಕ, ಧಾರ್ಮಿಕ, ಐತಿಹಾಸಿಕ, ಸಾಮಾಜಿಕ, ರಮ್ಯ, ಮಾಂತ್ರಿಕ, ಸ್ಥಳೀಯ ಆಧ್ಯಾತ್ಮಿಕ ಮತ್ತು ಆಧುನಿಕ ಲಾವಣಿಗಳೆಂದು ವಿಭಾಗಿಸಬಹುದು. ಸಾಮಾಜಿಕ ಲಾವಣಿಗಳನ್ನು ವಾಸ್ತವಿಕ, ವಿಡಂಬನಾತ್ಮಕ, ಹಾಸ್ಯ-ವಿನೋದ, ನೀತಿ, ಪ್ರಣಯಪ್ರಧಾನ ಲಾವಣಿಗಳೆಂದು ಗುರುತಿಸಲು ಸಾಧ್ಯವಿದೆ. 

ಒಟ್ಟಾರೆ ಸಮಕಾಲೀನ ನಂಬಿಕೆ, ಐತಿಹಾಸಿಕ ವಿವರ, ಗತಕಾಲದ ಆಚಾರ ಸಂಪ್ರದಾಯಗಳು, ಜನಪದ ಕಥೆಯ ಆಶಯಗಳನ್ನು ಹೊಂದಿ ರುವ ಲಾವಣಿಗಳು ಜಾನಪದ ಶಾಸ್ತ್ರಜ್ಞರಿಗೆ ಅಮೂಲ್ಯ ಆಕರವೆನಿಸುತ್ತವೆ. ಗಂಭೀರ ಕಥಾವಸ್ತು ಮತ್ತು ಮನಸ್ಸನ್ನು ತೀವ್ರವಾಗಿ ತಟ್ಟುವ ಗುಣದಿಂದಾಗಿ ಮೇಲ್ಮಟ್ಟದ ಕಾವ್ಯವಾಗಿಯೂ ಇವು ಗಮನ ಸೆಳೆಯುತ್ತವೆ. ಲಾವಣಿ ಪದಗಳು(1912), ಯುರೋಪು ಖಂಡದ ಮಹಾಯುದ್ಧದ ಲಾವಣಿ ಪದಮಾಲಿಕೆ(1918), ತುರಾಲಾವಣಿ(1929), ಜೀವನ ಸಂಗೀತ (1971), ಲಾವಣಿಗಳು(1972), ಫ್ಲೀಟರು ಸಂಗ್ರಹಿಸಿದ ಐದು ಐತಿಹಾಸಿಕ ಲಾವಣಿಗಳು(1972), ಕೆಲವು ಲಾವಣಿಗಳು (1973), ಬೆಳಗಾಂ ಜಿಲ್ಲೆಯ ಲಾವಣಿಗಳು(1973), ಬಯಲು ಸೀಮೆಯ ಲಾವಣಿಗಳು(1973), ದೊಂಬಿದಾಸರ ಲಾವಣಿಗಳು(1974), ಬಾಳಗೋಪಾಳನ ಲಾವಣಿಗಳು-ಇವು ಕನ್ನಡದ ಕೆಲವು ಮುಖ್ಯ ಲಾವಣಿ ಸಂಗ್ರಹಗಳು.     
(ಎಸ್.ಕೆಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ